Tuesday, September 14, 2010

ಸೌಜನ್ಯರಹಿತ ನಡವಳಿಕೆ

ಪ್ರಜಾವಾಣಿ » ಸಂಪಾದಕೀಯ

Sept 14 Prajavani Editorial
ಸೌಜನ್ಯರಹಿತ ನಡವಳಿಕೆ
ಅಮೆರಿಕ ಕನ್ನಡ ಕೂಟಗಳ ಆಗರ ‘ಅಕ್ಕ’ ಏರ್ಪಡಿಸಿದ ಆರನೇ ವಿಶ್ವಕನ್ನಡ ಸಮ್ಮೇಳನದಲ್ಲಿ ಕರ್ನಾಟಕದಿಂದ ತೆರಳಿದ ಸರ್ಕಾರದ ಅಧಿಕೃತ ಸಾಂಸ್ಕೃತಿಕ ನಿಯೋಗಕ್ಕೆ ಊಟೋಪಚಾರದ ಮೂಲ ಅಗತ್ಯಗಳನ್ನೂ ಒದಗಿಸದ ಸಂಘಟಕರ ನಡವಳಿಕೆ ನಾಚಿಕೆಗೇಡಿನದು.


ಆತಿಥ್ಯಕ್ಕೆ ಹೆಸರಾದ ಕನ್ನಡ ಸಂಸ್ಕೃತಿಗೆ ಅಪಚಾರ. ಸರ್ಕಾರದ ಕಾರ್ಯದರ್ಶಿ ನೇತೃತ್ವದಲ್ಲಿ ತೆರಳಿದ ಕನ್ನಡ ಕಲಾವಿದರು, ಬರಹಗಾರರು ಪರದೇಶದಲ್ಲಿ ಪರದಾಡಬೇಕಾಗಿ ಬಂದದ್ದು ದುರದೃಷ್ಟಕರ. ತಮ್ಮ ಆಹ್ವಾನದ ಮೇರೆಗೆ ಬಂದ ಅತಿಥಿಗಳನ್ನು ಉಪಚರಿಸಬೇಕಾದದ್ದು ಸಂಘಟಕರ ನೈತಿಕ ಕರ್ತವ್ಯ. ಪ್ರಕಟವಾಗಿರುವ ವರದಿಗಳನ್ನು ಗಮನಿಸಿದರೆ ‘ಅಕ್ಕ’ದ ಸಂಘಟಕರು ಸಮ್ಮೇಳನದ ವೇದಿಕೆಯನ್ನು ತಮ್ಮತಮ್ಮವರ ಕುಟುಂಬಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಿತಿಗೊಳಿಸಿ ಆಹ್ವಾನಿತ ಕಲಾವಿದರನ್ನು ನಿರ್ಲಕ್ಷಿಸಿ ಅಪಮಾನಪಡಿಸಿದ್ದಾರೆ.

ಇದರ ನೈತಿಕ ಹೊಣೆಯಿಂದ ‘ಅಕ್ಕ’ ಸಮ್ಮೇಳನ ಸಂಘಟನಾ ಸಮಿತಿ ತಪ್ಪಿಸಿಕೊಳ್ಳಲಾಗದು. ಸಂಘಟಕರದು ಸಲ್ಲದ ನಡವಳಿಕೆ. ಇದು ಅಕ್ಷ್ಯಮ್ಯ. ತಾಯ್ನಾಡಿನಿಂದ ದೂರ ಇದ್ದ ಕನ್ನಡ ಬಂಧುಗಳ ಆಹ್ವಾನದ ಮೇರೆಗೆ ಅವರಿಗೆ ನಾಡಿನ ಕಲೆ, ಸಂಸ್ಕೃತಿಗೆ ಸಂಬಂಧಪಟ್ಟ ಪ್ರದರ್ಶನಗಳನ್ನು ನೀಡಲೆಂದು ತೆರಳಿದ ಕವಿ ಕಲಾವಿದರಿಗೆ ಈಗ ಆಗಿರುವ ಅಪಮಾನ ಅವರ ಸಾಂಸ್ಕೃತಿಕ ಬದುಕಿನಲ್ಲಿ ಕಪ್ಪುಚುಕ್ಕೆಯಂತೆ ಬಾಧಿಸುತ್ತದೆ. ಇದು ವಿದೇಶ ಪ್ರವಾಸದ ಆಕರ್ಷಣೆಗೆ ರಾಜಕೀಯ ಒತ್ತಡ ತಂದು ಸಾಂಸ್ಕೃತಿಕ ನಿಯೋಗದಲ್ಲಿ ಸೇರಿಕೊಳ್ಳುವ ಕವಿ, ಕಲಾವಿದರಿಗೆ ಎಚ್ಚರಿಕೆಯ ಪಾಠವೂ ಆಗಿದೆ.

ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉದಾರ ಆರ್ಥಿಕ ನೆರವು ನೀಡುವ ಸರ್ಕಾರದ ಉದ್ದೇಶವೇನೋ ಒಳ್ಳೆಯದೆ. ಅಮೆರಿಕಕ್ಕೆ ಮಾತ್ರವಲ್ಲದೆ, ಜಗತ್ತಿನ ಯಾವ ದೇಶದಲ್ಲಿ ಕನ್ನಡಿಗರ ಸಮ್ಮೇಳನ ನಡೆದರೂ ಅದಕ್ಕೆ ಸರ್ಕಾರ ಸಾಂಸ್ಕೃತಿಕ ನಿಯೋಗ ಕಳುಹಿಸುವುದು ಹೊರನಾಡ ಕನ್ನಡಿಗರಲ್ಲಿ ಭಾವನಾತ್ಮಕ ಬೆಸುಗೆಯನ್ನು ಉಂಟು ಮಾಡುವ ಸದ್ವರ್ತನೆ. ಆದರೆ ಸಾಂಸ್ಕೃತಿಕ ನಿಯೋಗದ ಆತಿಥ್ಯದ ಜವಾಬ್ದಾರಿಯನ್ನು ಸಂಘಟಕರಿಗೆ ವಹಿಸದೆ ತಾನೇ ನೋಡಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ ಎಂಬುದನ್ನು ‘ಅಕ್ಕ’ ಸಮ್ಮೇಳನದ ಕಹಿ ಪ್ರಸಂಗ ಮನದಟ್ಟು ಮಾಡಿಕೊಟ್ಟಿದೆ. ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅವರೇ ಆತಿಥೇಯರ ಅವಜ್ಞೆಗೆ ಗುರಿಯಾಗಿ ಸಾಂಸ್ಕೃತಿಕ ನಿಯೋಗದ ಸದಸ್ಯರು ಅನುಭವಿಸಬೇಕಾಗಿ ಬಂದ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.

ಅವರ ಅನುಭವ, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಸಹಕಾರಿಯಾಗಬೇಕು. ಸಮ್ಮೇಳನಗಳು ಸಮರ್ಪಕವಾಗಿ ನಡೆದಿವೆ ಎಂಬುದನ್ನು ಖಾತರಿಪಡಿಸಿಕೊಂಡು ನಂತರ ಅನುದಾನ ಬಿಡುಗಡೆ ಮಾಡಬಹುದೆಂಬ ಅವರ ಚಿಂತನೆ ಪರಿಶೀಲನೆಗೆ ಅರ್ಹವಾದುದು. ಅಷ್ಟಕ್ಕೂ ಅಮೆರಿಕದಲ್ಲಿ ನೆಲೆಸಿದ ಅನುಕೂಲವಂತ ಕನ್ನಡಿಗರು ತಮ್ಮತಮ್ಮಲ್ಲಿ ಸಂಘಟಿತರಾಗಿ ಸಾಂಸ್ಕೃತಿಕ ಸಮ್ಮೇಳನ ನಡೆಸುವುದಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ರೂಪದ ನೆರವು ಅವಶ್ಯಕವೇ ಎಂಬುದನ್ನು ಈ ಘಟನೆಯ ನಂತರವಾದರೂ ಸರ್ಕಾರ ಪರಿಶೀಲಿಸಬೇಕು.

1 comment:

  1. Good One Ganga.. Nice article. Never knew all this happened.

    ReplyDelete